1919-47. ಪ್ರಪಂಚದ ಪ್ರಥಮ ಅಂತಾರಾಷ್ಟ್ರೀಯ ಸಂಸ್ಥೆ (ರಾಷ್ಟ್ರಸಂಘ). ಒಂದನೆಯ ಮಹಾಯುದ್ಧದ ಅನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಸ್ಥಾಪನೆಗಾಗಿ 1920 ಜನವರಿ 10ರಂದು ಅಸ್ತಿತ್ವಕ್ಕೆ ಬಂತು. ಒಂದನೆಯ ಮಹಾಯುದ್ಧದ ಕ್ರೂರ ಪರಿಣಾಮ ಮತ್ತು ಶಾಂತಿಯ ಕೂಗು ಇದರ ಉದಯಕ್ಕೆ ಕಾರಣವಾಯಿತು. ಅಂತಾರಾಷ್ಟ್ರೀಯ ಶಾಂತಿ ಮತ್ತು ಸುಭದ್ರತೆಯನ್ನು ಸ್ಥಾಪಿಸುವುದಕ್ಕಾಗಿ ಅಮೆರಿಕದ ಅಧ್ಯಕ್ಷ ವುಡ್ರೊವಿಲ್ಸನ್ 14 ಅಂಶಗಳನ್ನು ವರ್ಸೇಲ್ಸ್ ಒಪ್ಪಂದದ (1919) ಮುಂದಿಟ್ಟ. ಆಗ ಜನರಲ್ ಅಸೋಸಿಯೇಷನ್ ಆಫ್ ನೇಷನ್ಸ್ ಎಂಬ ಸಮಿತಿ ಸ್ಥಾಪಿಸಿ ಆ ಮೂಲಕ ವಿಶ್ವಶಾಂತಿ ಕಾಪಾಡುವುದೆಂದು ನಿರ್ಧರಿಸಲಾಯಿತು. ಆ ಪ್ರಕಾರ 1920 ಜನವರಿ 10 ರಂದು ಅಧಿಕೃತವಾಗಿ ಲೀಗ್ ಆಫ್ ನೇಷನ್ಸ್ ಅಸ್ತಿತ್ವಕ್ಕೆ ಬಂತು. ಇದರ ಕಾರ್ಯಾಲಯ ಸ್ಪಿಟ್ಜರ್‍ಲೆಂಡಿನ ಜಿನೀವದಲ್ಲಿತ್ತು. ಇದರ ಆರಂಭದ ಸದಸ್ಯರ ಸಂಖ್ಯೆ 42 ಅನಂತರ 1935ರ ವೇಳೆಗೆ 62 ಆಯಿತು. 
ಈ ಸಂಸ್ಥೆಯ ಧ್ಯೆಯೋದ್ದೇಶಗಳು : ಪ್ರಪಂಚದಲ್ಲಿ ಶಾಂತಿ ಸ್ಥಾಪಿಸಿ, ಪರಸ್ಪರ ಸಹಕಾರ ಹಾಗೂ ಸಹಬಾಳ್ವೆ ವೃದ್ಧಿಸುವುದು. ನಿಶ್ಶಸ್ತ್ರೀಕರಣಕ್ಕೆ ಒತ್ತು ನೀಡಿ ರಾಷ್ಟ್ರಗಳ ನಡುವೆ ರಹಸ್ಯ ಒಪ್ಪಂದ ಮತ್ತು ಭವಿಷ್ಯದಲ್ಲಿ ಯುದ್ಧ ತಡೆಯುವುದು, ಅಂತಾರಾಷ್ಟ್ರೀಯ ವಿವಾದಗಳನ್ನು ಶಾಂತಿ ಸಂಧಾನದ ಮೂಲಕ ಬಗೆಹರಿಸುವುದು, ವಸಾಹತು ರಾಷ್ಟ್ರಗಳ ಹಿತಾಸಕ್ತಿ ಕಾಪಾಡಿ, ಶ್ರೇಯೋಭಿವೃದ್ಧಿಗೆ ಶ್ರಮಿಸುವುದು, ಸದಸ್ಯ ರಾಷ್ಟ್ರಗಳ ಸ್ವಾತಂತ್ರ್ಯ, ಸಮಾನತೆ ಹಾಗೂ ಪ್ರಪಂಚದ ಜೊತೆಗೆ ಉತ್ತಮ ಜೀವನಾವಕಾಶ ಒದಗಿಸಿಕೊಡುವುದು. 
ಅಂಗ ಸಂಸ್ಥೆಗಳು : ಇದು ತನ್ನ ಕಾರ್ಯನಿರ್ವಣೆಗಾಗಿ ನಾಲ್ಕು ಪ್ರಮುಖ ಸಮಿತಿಗಳನ್ನು ಹೊಂದಿತ್ತು.

ಮಹಾಸಭೆ : ಪ್ರಪಂಚ ಸಂಸತ್ತಿನಂತಿದ್ದು, ಲೀಗ್‍ನ ಎಲ್ಲ ಸದಸ್ಯರನ್ನೊ ಳಗೊಂಡಿತ್ತು. ಮೊದಲಸಭೆ 1920 ನವೆಂಬರ್ 15ರಂದು ಜಿನೀವದಲ್ಲಿ ಜರುಗಿತು. ಈ ಸಭೆಯಲ್ಲಿ ತಲಾ ಮೂವರು ಪ್ರತಿನಿಧಿಗಳಂತೆ 42 ಸದಸ್ಯ ರಾಷ್ಟ್ರಗಳು ಭಾಗವಹಿಸಿದ್ದವು. ಈ ಸಮಿತಿ ವರ್ಷಕ್ಕೊಮ್ಮೆ ಸಭೆ ಸೇರಿ ಉಪಸಮಿತಿಗಳಿಗೆ ಸದಸ್ಯರನ್ನು ಆಯ್ಕೆ ಮಾಡುತ್ತಿತ್ತು. 
ಭದ್ರತಾ ಮಂಡಳಿ : ಇಂಗ್ಲೆಂಡ್, ಫ್ರಾನ್ಸ್, ಇಟಲಿ, ಜರ್ಮನಿ, ಜಪಾನ್ - ಇವು ಖಾಯಂ ಪ್ರತಿನಿಧಿಗಳು. ಉಳಿದವು ಹಂಗಾಮಿ. ಯುದ್ಧ ತಡೆಗಟ್ಟುವುದು, ವಿಶ್ವಶಾಂತಿ, ಭದ್ರತೆ, ರಾಷ್ಟ್ರಗಳ ನಡುವಣ ವಿವಾದ ಬಗೆಹರಿಸುವುದು, ಮಹಾಸಭೆಯ ತೀರ್ಮಾನಗಳನ್ನು ಕಾರ್ಯಗತ ಗೊಳಿಸುವುದು ಭದ್ರತಾ ಮಂಡಳಿಯ ಪ್ರಧಾನ ಕಾರ್ಯಗಳು. 
ಕಾರ್ಯಾಲಯ : ಇದರ ಪ್ರಧಾನ ಕಾರ್ಯಾಲಯ ಸ್ವಿಟ್ಜರ್‍ಲೆಂಡಿನ ಜಿನೀವದಲ್ಲಿದೆ. ಲೀಗ್‍ನ ದೈನಂದಿನ ಕಾರ್ಯ ಕಲಾಪಗಳುನ್ನು ನಡೆಸುವುದು ಲೆಕ್ಕಪತ್ರಗಳನ್ನಿಡುವುದು ಈ ಕಾರ್ಯಾಲಯದ ಮುಖ್ಯ ಕಾರ್ಯ. ಕಾರ್ಯದರ್ಶಿ ಇದರ ಮುಖ್ಯಾಧಿಕಾರಿ, ಬಹುಮತದ ಆಧಾರದ ಮೇಲೆ ಸಾರ್ವತ್ರಿಕ ಸಭೆಯಲ್ಲಿ ಇವನನ್ನು ಭದ್ರತಾಮಂಡಳಿ ನೇಮಕ ಮಾಡುತ್ತಿತ್ತು. ಸರ್ ಎರಿಕ್ ಡ್ರುಮಾಂಡ್ ಇದರ ಪ್ರಥಮ ಕಾರ್ಯದರ್ಶಿಯಾಗಿದ್ದ. 
ಅಂತಾರಾಷ್ಟ್ರೀಯ ನ್ಯಾಯಾಲಯ : 1922 ಫೆಬ್ರವರಿ 13ರಂದು ಹಾಲೆಂಡಿನ ಹೇಗ್ ನಗರದಲ್ಲಿ ಇದನ್ನು ಸ್ಥಾಪಿಸಲಾಯಿತು. ಇದು ಭದ್ರತಾ ಸಮಿತಿಯ ಶಿಫಾರಸಿನ ಮೇರೆಗೆ ಮಹಾಸಭೆಯಿಂದ ಆಯ್ಕೆ ಮಾಡಿದ 9 ಮಂದಿ ನ್ಯಾಯಾಧೀಶರು ಹಾಗೂ ನಾಲ್ಕು ಉಪನ್ಯಾಯಾಧೀಶರನ್ನು ಹೊಂದಿತ್ತು. ಅವರ ಕಾಲಾವಧಿ 9 ವರ್ಷಗಳು. ಅಂತಾರಾಷ್ಟ್ರೀಯ ಸಮಸ್ಯೆಗಳನ್ನು ನ್ಯಾಯಾಂಗ ವಿಚಾರಣೆಯಿಂದ ತೀರ್ಮಾನಿಸುವುದು, ಮಹಾಸಭೆ ಅಥವಾ ಭದ್ರತಾ ಮಂಡಳಿ ಉಲ್ಲೇಖಿಸುವ ವಿಚಾರಗಳ ಮೇಲೆ ತೀರ್ಮಾನಕೊಡುವ ಅಧಿಕಾರವಿತ್ತು. ಇವುಗಳಲ್ಲದೆ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐ.ಎಲ್.ಓ) ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‍ಓ), ಅಂತಾರಾಷ್ಟ್ರೀಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಮಿತಿ (ಯುನೆಸ್ಕೋ) ಎಂಬ ಅಂಗ ಸಂಸ್ಥೆಗಳನ್ನು ಒಳಗೊಂಡಿತ್ತು.

ರಾಜಕೀಯ ಸಾಧನೆಗಳು : 40 ರಾಜಕೀಯ ವಿವಾದಗಳನ್ನು ಇದು ಪರಿಶೀಲಿಸಿತು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಸ್ವೀಡನ್ ಮತ್ತು ಫಿನ್‍ಲೆಂಡ್‍ಗಳ ನಡುವಿನ ವಿವಾದ, ಎಲ್ಲ ಜಿಲ್ಲೆಯ ವಿಷಯವಾಗಿ ಲಿಥುವೇನಿಯ ಹಾಗೂ ಪೋಲೆಂಡ್ ನಡುವಿನ ವಿವಾದ, ಬೆಲ್ಜಿಯಂ ಹಾಗೂ ಜರ್ಮನಿ ನಡುವಿನ ವಿವಾದಗಳು ಸೇರಿದಂತೆ ಹಲವು ಸಮಸ್ಯೆಗಳನ್ನು ಇದು ಬಗೆಹರಿಸಿ ಶಾಂತಿ ನೆಲೆಸುವಂತೆ ಮಾಡಿತು. 

ರಾಜಕೀಯ ಸಾಧನೆಗಳು : ಒಂದನೆಯ ಮಹಾಯುದ್ಧದ ಅನಂತರ ಹಲವು ರಾಷ್ಟ್ರಗಳು ಆರ್ಥಿಕವಾಗಿ ದಿವಾಳಿಯಾದಾಗ ಅವುಗಳ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ನೀಡಲು ಮತ್ತು ಅಭಿವೃದ್ಧಿ ಸೂಚಿಸಲು 1927ರಲ್ಲಿ ಪ್ರಪಂಚ ಮಟ್ಟದಲ್ಲಿ ಹಣಕಾಸು ಮತ್ತು ಆರ್ಥಿಕ ಸಮ್ಮೇಳನಗಳನ್ನು ನಡೆಸಿತು. ಸುಂಕ, ರಫ್ತು, ವ್ಯಾಪಾರ, ನಕಲಿನಾಣ್ಯಗಳ ತಡೆಯುವಿಕೆಯ ಬಗೆಗೆ ಇದು ಪ್ರಪಂಚದ ರಾಷ್ಟ್ರಗಳಿಗೆ ಕೆಲವು ನಿಯಮವನ್ನು ರೂಪಿಸಿಕೊಟ್ಟಿತು. 1920ರಲ್ಲಿ ಅಂತಾರಾಷ್ಟ್ರೀಯ ಸಂಪರ್ಕ ಮತ್ತು ಪ್ರಯಾಣ ಸಂಸ್ಥೆಯನ್ನು ಸ್ಥಾಪಿಸಿ ನದಿಗಳಲ್ಲಿ ಸಾಗಾಟ, ಸಮುದ್ರಗಳ ಸಿಗ್ನಲ್, ತೀರಪ್ರದೇಶಗಳಲ್ಲಿ ಲೈಟ್‍ಹೌಸ್ ಕಟ್ಟುವುದು ಮತ್ತು ರಸ್ತೆಸಾರಿಗೆ ಬಗ್ಗೆ ಕೆಲವು ಸಲಹೆಗಳನ್ನು ನೀಡಿತು. ನಿರಾಶ್ರಿತರು ಯುದ್ಧಖೈದಿಗಳು ಮತ್ತು ಕಾರ್ಮಿಕರ ಸ್ಥಿತಿಗತಿಗಳನ್ನು ವೃದ್ಧಿಸಲು ಶ್ರಮಿಸಿತು. ಆಸ್ಟ್ರಿಯವನ್ನು ಹಸಿವು ಹಾಗೂ ದಾರಿದ್ರ್ಯದಿಂದ ಪಾರುಮಾಡಲು ಅಲ್ಲಿ ಹೊಸ ಕೈಗಾರಿಕೆ ಮತ್ತು ಕೃಷಿಗೆ ಉತ್ತೇಜನ ನೀಡಲಾಯಿತು. 1923ರಲ್ಲಿ ಜಿನೀವದಲ್ಲಿ “ಸ್ಲೇವರಿ ಕನ್ವೆನ್‍ಷನ್ ಕಾನ್ಫರೆನ್ಸ್’ ಕರೆದು “ಶಾಶ್ವತ ಗುಲಾಮಗಿರಿ ಆಯೋಗ’ ರಚಿಸಿ ಪ್ರಪಂಚದಲ್ಲಿ ಗುಲಾಮಗಿರಿಯನ್ನು ತೊಡೆದು ಹಾಕಲು ಪ್ರಯತ್ನಿಸಿತು. ವಿಶ್ವ ಆರೋಗ್ಯ ಸಂಸ್ಥೆಯಿಂದ ಹಲವಾರು ಮಾರಕ ರೋಗಗಳ ನಿವಾರಣೆಗೆ ಶ್ರಮಿಸಿತು. ಮಹಿಳೆ ಹಾಗೂ ಮಕ್ಕಳ ಕಲ್ಯಾಣ ಮಹಿಳೆ ಹಾಗೂ ಮಕ್ಕಳ ಮಾರಾಟ ನಿಷೇಧ ಮಾದಕದ್ರವ್ಯ ಬಳಕೆ ನಿಯಂತ್ರಣ, ಸೆರೆಮನೆಗಳ ಸುಧಾರಣೆ, ಬಲಾತ್ಕಾರದ ಸೇವೆ ಮತ್ತು ಅಶ್ಲೀಲ ಸಾಹಿತ್ಯ ನಿಷೇಧ ಮೊದಲಾದ ವಿಚಾರಗಳಲ್ಲಿ ಗಮನಾರ್ಹ ಸಾಧನೆ ಮಾಡಿತು. 

ಲೀಗ್‍ನ ವಿಫಲತೆ : ಈ ಸಂಸ್ಥೆ ಅನೇಕ ವಿಚಾರಗಳಲ್ಲಿ ಯಶಸ್ವಿಯಾದರೂ ಅಂತಾರಾಷ್ಟ್ರೀಯ ಮಟ್ಟದ ವಿವಾದ ಬಗೆಹರಿಸುವುದರಲ್ಲಿ ಶಾಂತಿ, ಸಹಕಾರ, ಭದ್ರತೆ, ನಿಶ್ಶಸ್ತ್ರೀಕರಣದಂತಹ ತನ್ನ ಮುಖ್ಯ ಗುರಿ ಸಾಧಿಸುವಲ್ಲಿ ಅದು ವಿಫಲಗೊಂಡಿತು. ಹೀಗಾಗಲು ಹಲವಾರು ಕಾರಣಗಳಿದ್ದವು. ತಪ್ಪು ಪ್ರಣಾಳಿಕೆ, ಮಹಾಸಭೆ ಮತ್ತು ಮಹಾಮಂಡಳಿಗಳ ನಡುವಿನ ಅಧಿಕಾರ ಅನಿರ್ದಿಷ್ಟತೆ ಅಮೆರಿಕ, ರಷ್ಯದಂತಹ ಪ್ರಬಲ ರಾಷ್ಟ್ರಗಳು ತಡವಾಗಿ ಸದಸ್ಯತ್ವ ಪಡೆದುಕೊಂಡಿದ್ದುದು, ಬಹುಪಾಲು ರಾಷ್ಟ್ರಗಳು ಸದಸ್ಯತ್ವ ಪಡೆದುಕೊಳ್ಳದೇ ಹೋದುದು. ಇಂಥ ಅನೇಕ ಕಾರಣಗಳನ್ನು ನೀಡಬಹುದು. ಅಲ್ಲದೆ, ನಿಯಮ ಮೀರಿದ ರಾಷ್ಟ್ರಗಳಿಗೆ ಶಿಕ್ಷಿಸುವ ಅಧಿಕಾರ ಲೀಗ್‍ಗೆ ಇರಲಿಲ್ಲ. ಜರ್ಮನಿ, ಇಟಲಿಯಂತಹ  ದೇಶಗಳಲ್ಲಿ ಅಂಧ ರಾಷ್ಟ್ರೀಯತೆ ಬೆಳೆದು ರಾಷ್ಟ್ರಸಂಘದಿಂದ ಹೊರಬಂದವು. ಅದಕ್ಕೆ ತನ್ನದೆ ಆದ ಸೈನ್ಯ ಬಲ ಹಾಗೂ ಜನಬೆಂಬಲವಿರಲಿಲ್ಲ. ಹಲವಾರು ರಾಷ್ಟ್ರಗಳು ಅದಕ್ಕೆ ವಿರುದ್ಧವಾಗಿ ವರ್ತಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದರ ಜೊತೆಗೆ ಇನ್ನು ಹಲವಾರು ಕಾರಣಗಳಿಂದ ಲೀಗ್ ವಿಫಲಗೊಂಡಿತು. ಆದರೆ ಇದರ ಆಶಯಗಳು ಎರಡನೆಯ ಮಹಾಯುದ್ಧದ ಅನಂತರ ಸ್ಥಾಪಿತವಾದ ವಿಶ್ವಸಂಸ್ಥೆಯಲ್ಲಿ ಮುಂದುವರಿದವು. ಲೀಗ್‍ನ ಸಮಗ್ರ ವ್ಯವಸ್ಥೆಯನ್ನು 1945-47ರ ಅವಧಿಯಲ್ಲಿ ವಿಶ್ವಸಂಸ್ಥೆಗೆ ವರ್ಗಾಯಿಸಲಾಯಿತು. 1947 ಏಪ್ರಿಲ್ 18ರಂದು ಲೀಗ್ ಅಧಿಕೃತವಾಗಿ ಸ್ಥಗಿತಗೊಂಡಿತು.
	
(ಆರ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ